ಬಹುಭಾಷಾ ನಟಿ ಹನ್ಸಿಕಾ ಮೋಟ್ವಾನಿ ವೈವಾಹಿಕ ಜೀವನ ಅಧಿಕೃತವಾಗಿ ಅಂತ್ಯಗೊಂಡಿದೆ. ಕಳೆದ ಒಂದು ವರ್ಷದಿಂದ ಹರಿದಾಡುತ್ತಿದ್ದ ವಿಚ್ಛೇದನದ ವದಂತಿಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಮುಂಬೈನ ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ಹನ್ಸಿಕಾ ಮತ್ತು ಉದ್ಯಮಿ ಸೊಹೈಲ್ ಖತರಿಯಾ ಅವರಿಗೆ ವಿಚ್ಛೇದನ ಮಂಜೂರು ಮಾಡಿದೆ. ಹನ್ಸಿಕಾ ಮೋಟ್ವಾನಿ ಮತ್ತು ಸೊಹೈಲ್ ಅವರು ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ವಿಶೇಷವೆಂದರೆ, ಹನ್ಸಿಕಾ ಅವರು ಪತಿಯಿಂದ ಯಾವುದೇ ಜೀವನಾಂಶ ತೆಗೆದುಕೊಂಡಿಲ್ಲ..

ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯ ಪ್ರಕಾರ, ಮದುವೆಯಾದ ಕೆಲವೇ ದಿನಗಳಲ್ಲಿ ದಂಪತಿ ನಡುವೆ ಭಿನ್ನಾಭಿಪ್ರಾಯಗಳು ತಲೆದೋರಿದ್ದವು. ಅವರ ಜೀವನಶೈಲಿ, ಆಲೋಚನೆಗಳು ಮತ್ತು ಸ್ವಭಾವಗಳಲ್ಲಿನ ವ್ಯತ್ಯಾಸಗಳು ಪದೇ ಪದೇ ಜಗಳಕ್ಕೆ ಕಾರಣವಾಗುತ್ತಿದ್ದವು. ಸಣ್ಣ ವಿಷಯಗಳೂ ದೊಡ್ಡ ವಿವಾದಗಳಾಗಿ ಮಾರ್ಪಡುತ್ತಿದ್ದವು ಎನ್ನಲಾಗಿದೆ.
ಇಬ್ಬರ ನಡುವಿನ ಮನಸ್ತಾಪವನ್ನು ಸರಿಪಡಿಸಲು ಕುಟುಂಬದ ಸದಸ್ಯರು ಮತ್ತು ಆಪ್ತ ಸ್ನೇಹಿತರು ಹಲವು ಬಾರಿ ಪ್ರಯತ್ನಿಸಿದರೂ ಅದು ಪ್ರಯೋಜನವಾಗಿಲ್ಲ. 2024ರ ಜುಲೈ 2ರಿಂದ ಇಬ್ಬರೂ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈಗ ಕಾನೂನುಬದ್ಧವಾಗಿ ಬೇರ್ಪಟ್ಟಿದ್ದಾರೆ. ಈ ದಂಪತಿಗೆ ಮಕ್ಕಳಿಲ್ಲ. ಪರಸ್ಪರ ಯಾವುದೇ ಜೀವನಾಂಶ ನೀರೀಕ್ಷೆ ಮಾಡಿಲ್ಲ.
ಹನ್ಸಿಕಾ ಮತ್ತು ಸೊಹೈಲ್ 2022ರ ಡಿಸೆಂಬರ್ 4ರಂದು ಜೈಪುರದ ಅರಮನೆಯಲ್ಲಿ ಅತ್ಯಂತ ಅದ್ದೂರಿಯಾಗಿ ವಿವಾಹವಾಗಿದ್ದರು. ಹನ್ಸಿಕಾ ಕನ್ನಡ, ತೆಲುಗು, ಹಿಂದಿ, ಮಲಯಾಳಂ, ತಮಿಳು ಭಾಷೆಯ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಪುನೀತ್ ರಾಜ್ ಕುನಾರ್ ನಟನೆಯ ಕನ್ನಡದ ‘ಬಿಂದಾಸ್’ ಸಿನಿಮಾದಲ್ಲಿ ನಟಿಸಿದ್ದರು, 2008ರಲ್ಲಿ ಆ ಸಿನಿಮಾ ತೆರೆಕಂಡಿತ್ತು
