ಮದುವೆಯ ವಿಚಾರಕ್ಕೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ಕರೆತಂದ ಪ್ರಿಯಕರನೇ ಪ್ರೀತಿಸಿದ ಹುಡುಗಿಯನ್ನ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ವರ್ತೂರು ಪೊಲೀಸ್ ಠಾಣೆ ವ್ಯಾಪ್ತಿಯ ಕೊಡತಿ ಬಳಿ ನಡೆದಿದೆ. ಕೊಡಗು ಮೂಲದ ರಂಜಿತಾ (24) ಮೃತಪಟ್ಟ ದುರ್ದೈವಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಯ್ಯಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ರಂಜಿತಾ ಮತ್ತು ಆರೋಪಿ ಅಯ್ಯಪ್ಪ ಇಬ್ಬರೂ ಕೊಡಗಿನ ಪೊನ್ನಂಪೇಟೆ ಮೂಲದವರು. ಅಯ್ಯಪ್ಪನಿಗೆ ಈಗಾಗಲೇ ಮದುವೆಯಾಗಿದ್ದು, ಹೆಂಡತಿಯನ್ನು ಬಿಟ್ಟಿದ್ದಾನೆ. ಬಳಿಕ ತನ್ನ ಊರಿನ ಪಕ್ಕದವಳೇ ಆದ ರಂಜಿತಾಳ ಜೊತೆ ಪ್ರೀತಿಯಲ್ಲಿ ಬಿದ್ದ. ಅವಳನ್ನೇ ಮದುವೆಯಾಗುವುದಾಗಿ ಆಕೆಯನ್ನು ನಂಬಿಸಿದ್ದ. ಆತನ ಮಾತು ನಂಬಿದ ರಂಜಿತಾ ಮನೆ ಬಿಟ್ಟು ಬೆಂಗಳೂರಿಗೆ ಬಂದಿದ್ದಳು.
ಇಬ್ಬರೂ ಕೊಡತಿ ಬಳಿಯ ಗೋಪಾಲ್ ಎಂಬುವವರ ಮನೆಯಲ್ಲಿ ಕಳೆದ ಎರಡು ತಿಂಗಳಿನಿಂದ ವಾಸವಿದ್ದರು. ರಂಜಿತಾ ಡಿ-ಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದರು, ಅಯ್ಯಪ್ಪ ಡ್ರೈ ಫ್ರೂಟ್ಸ್ ಅಂಗಡಿಯಲ್ಲಿ ಸೂಪರ್‌ವೈಸರ್ ಆಗಿದ್ದ. ಆದರೆ, ಆತ ಇನ್ನು ಮೊದಲ ಪತ್ನಿಗೆ ವಿಚ್ಛೇದನ ನೀಡಿಲ್ಲ. ಆದರೆ ಆಗಲೆ ತನ್ನನ್ನು ಮದುವೆಯಾಗುವಂತೆ ರಂಜಿತಾ ಒತ್ತಾಯಿಸುತ್ತಿದ್ದಳು. ಇದೇ ವಿಚಾರಕ್ಕೆ ಇಬ್ಬರ ನಡುವೆ ನಿರಂತರ ಜಗಳ ನಡೆಯುತ್ತಿತ್ತು. ಶುಕ್ರವಾರ ಮಧ್ಯರಾತ್ರಿ ಜಗಳ ವಿಕೋಪಕ್ಕೆ ತಿರುಗಿದಾಗ, ಆರೋಪಿ ಅಯ್ಯಪ್ಪ ವೈಯರ್‌ನಿಂದ ರಂಜಿತಾಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
ಕೊಲೆ ಮಾಡಿದ ಬಳಿಕ ಆರೋಪಿ ಅಯ್ಯಪ್ಪ, ಇದೊಂದು ಆತ್ಮಹತ್ಯೆ ಎಂದು ಕಥೆ ಕಟ್ಟಿದ್ದ. ರಂಜಿತಾ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯ ಮಾಡಿಕೊಂಡಿದ್ದಾಳೆ ಎಂದು ನಂಬಿಸಲು ಪ್ರಯತ್ನಿಸಿದ. ಮನೆ ಮಾಲೀಕ ಗೋಪಾಲ್ ಅವರ ಬಳಿ ಹೋಗಿ, ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡಿ ಆಸ್ಪತ್ರೆಗೂ ಕರೆದೊಯ್ದಿದ್ದ. ಆದರೆ ಸ್ಥಳಕ್ಕೆ ಭೇಟಿ ನೀಡಿದ ವರ್ತೂರು ಪೊಲೀಸರು ಪರಿಶೀಲನೆ ನಡೆಸಿದಾಗ ಅಯ್ಯಪ್ಪನ ನಾಟಕ ಬಯಲಾಗಿದೆ.
