ಮಹಿಳೆಯರಿಗೆ ಮುಟ್ಟಿನ ರಜೆ ಕಡ್ಡಾಯ ಮಾಡಿದರೆ, ಅದು ಅವರ ಉದ್ಯೋಗಾವಕಾಶಗಳಿಗೆ ಮುಳುವಾಗಬಹುದು ಎಂದು ಸುಪ್ರೀಂ ಕೋರ್ಟ್ ಆತಂಕ ವ್ಯಕ್ತಪಡಿಸಿದೆ. ಮುಟ್ಟಿನ ರಜೆಯನ್ನು ಕಾನೂನುಬದ್ಧವಾಗಿ ಕಡ್ಡಾಯಗೊಳಿಸಿದರೆ, ಖಾಸಗಿ ಕಂಪನಿಗಳು ಸೇರಿದಂತೆ ಹಲವು ಉದ್ಯೋಗದಾತರು ಮಹಿಳೆಯರನ್ನು ನೇಮಿಸಿಕೊಳ್ಳಲು ಹಿಂದೇಟು ಹಾಕುತ್ತಾರೆ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟಿದ್ದಾರೆ.
ಮಹಿಳಾ ಉದ್ಯೋಗಿಗಳು, ವಿದ್ಯಾರ್ಥಿನಿಯರಿಗೆ ರಾಷ್ಟ್ರದಾದ್ಯಂತ ಮುಟ್ಟಿನ ರಜೆ ಕಡ್ಡಾಯ ನೀತಿ ರೂಪಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರಿಂಕೋರ್ಟ್ ತಿರಸ್ಕರಿಸಿ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಕಾನೂನು ಜಾರಿಗೆ ಬಂದರೆ, ಪುರುಷರಿಗಿಂತ ಮಹಿಳೆಯರು ದುರ್ಬಲರು ಎಂಬ ತಪ್ಪು ಕಲ್ಪನೆ ಸಮಾಜದಲ್ಲಿ ಹರಡುತ್ತದೆ ಎಂದು ಮುಖ್ಯ ನ್ಯಾಯಮೂರ್ತಿಗಳು ಹೇಳಿದರು. ಈ ರೀತಿ ಕಾನೂನು ಬಂದರೆ ಮಹಿಳೆಯರನ್ನು ಕೆಲಸಕ್ಕೆ ತೆಗೆದುಕೊಳ್ಳುವುದನ್ನೇ ನಿಲ್ಲಿಸುತ್ತಾರೆ’ ಎಂದು ಕೋರ್ಟ್ ಅರ್ಜಿದಾರರಿಗೆ ಎಚ್ಚರಿಕೆ ನೀಡಿತು.
ಅರ್ಜಿದಾರರ ಪರವಾಗಿ ಹಾಜರಾದ ಹಿರಿಯ ವಕೀಲ ಎಂಆರ್ ಶಂಷದ್, ಕೆಲವು ರಾಜ್ಯಗಳು ಮತ್ತು ಸಂಸ್ಥೆಗಳು ಈಗಾಗಲೇ ಮುಟ್ಟಿನ ರಜೆಗೆ ಅವಕಾಶ ಕಲ್ಪಿಸಿವೆ ಎಂದು ನ್ಯಾಯಾಲಯದ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ, ‘ಸ್ವಯಂಪ್ರೇರಿತ ನೀತಿಗಳು ಸ್ವಾಗತಾತಾರ್ಹ’ ಎಂದರು. ‘ಆದರೆ ಕಾನೂನಿನ ಮೂಲಕ ಅಂತಹ ನಿಯಮಗಳನ್ನು ಕಡ್ಡಾಯಗೊಳಿಸುವುದು ವಿರುದ್ಧ’ ಎಚ್ಚರಿಕೆ ನೀಡಿದರು.
