ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಯುಗಾದಿ ಹಬ್ಬಕ್ಕೆ ಸರ್ಪ್ರೈಸ್ ನೀಡಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಅನ್ನು ಅನ್ಫಾಲೋ ಮಾಡುವ ಮೂಲಕ ಶಾಕ್ ನೀಡಿದ್ದ ಬೆನ್ನಲ್ಲೆ ರಿಷಬ್ ಶೆಟ್ಟಿ ಸಿಹಿ ಸುದ್ದಿ ಹಂಚಿಕೊಂಡಿದ್ದಾರೆ. ರಿಷಬ್ ಶೆಟ್ಟಿ ಇನ್ನೇನು ಹೊಂಬಾಳೆ ಫಿಲ್ಮ್ಸ್ ಜೊತೆ ಸೇರಿ ಕಾಂತಾರ ಮುಂದಿನ ಭಾಗ ಅನೌನ್ಸ್ ಮಾಡಲಿದ್ದಾರೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೀಗ ರಿಷಬ್ ಶೆಟ್ಟಿ ಹೊಂಬಾಳೆಯಿಂದ ದೂರ ಸರಿದು ತನ್ನದೆ ಬ್ಯಾನರ್ ನಲ್ಲಿ ಅಧ್ಯಾಯ-2 ಆರಂಭಿಸಿದ್ದಾರೆ.
ಹೌದು, ‘ಅಧ್ಯಾಯ ಎರಡು ಇಲ್ಲಿಂದ ಶುರು’ ಎನ್ನುವ ಪೋಸ್ಟ್ ಹಂಚಿಕೊಳ್ಳುವ ಮೂಲಕ ಅಚ್ಚರಿ ನೀಡಿದ್ದಾರೆ. ಈ ಮೂಲಕ ಕಾಂತಾರಾ ಚಾಪ್ಟರ್ 2ರ ಹಿಂಟ್ ಕೊಟ್ಟಿದ್ದಾರೆ ಎನ್ನಲಾಗಿದೆ. ಆದರೆ ಈ ಪೋಸ್ಟ್ ನಲ್ಲಿ ಹೊಂಬಾಳೆ ಫಿಲಂಸ್ನ ಯಾವುದೇ ಹೆಸರು ಬಳಸಿಕೊಂಡಿಲ್ಲ. ಈ ಮೂಲಕ ಹೊಂಬಾಳೆಯಿಂದ ರಿಷಬ್ ಅಧಿಕೃತವಾಗಿ ದೂರ ಸರಿದಂತೆ ಆಗಿದೆ. ಜೊತೆಗೆ ರಿಷಬ್ ಮತ್ತು ಹೊಂಬಾಳೆ ನಡುವಿನ ಮನಸ್ತಾಪದ ಗುಸುಗುಸು ನಿಜ ಎನ್ನುವಂತಾಗಿದೆ.
ಹೊಂಬಾಳೆ ಬಿಟ್ಟು, ಕಾಂತಾರ ಹೊಸ ಅಧ್ಯಾಯ ಮಾಡ್ತಿರುವುದು ಅಧಿಕೃತವಾಗಿದೆ. ಯಾವಾಗ ಪ್ರಾರಂಭ ಮಾಡಲಿದ್ದಾರೆ, ನಿಜಕ್ಕೂ ಕಾಂತಾರಾ ಅಧ್ಯಾಯ -2 ಬಗ್ಗೆಯೇ ರಿಷಬ್ ಹೇಳಿದ್ದಾರಾ ಎನ್ನುವ ಬಗ್ಗೆ ಸ್ವತಃ ರಿಷಬ್ ಅವರೇ ಸ್ಪಷ್ಟನೆ ನೀಡಬೇಕಿದೆ.
