ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಮೊದಲ ಬಾರಿಗೆ ಲೋಕಸಭೆಯಲ್ಲಿ ಮಾತನಾಡಿದರು. ಇರಾನ್ ಹಾಗೂ ಅಮೆರಿಕ, ಇಸ್ರೇಲ್ ನಡುವಿನ ಯುದ್ಧದಿಂದ ಭಾರತಕ್ಕೆ ಎದುರಾಗಿರುವ ಸಮಸ್ಯೆ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮೋದಿ ಸದನಲ್ಲಿ ವಿವರಿಸಿದರು.
ಸದ್ಯ ಎದುರಾಗಿರುವ ಬಿಕ್ಕಟ್ಟು ತಾತ್ಕಾಲಿಕವಾಗಿದ್ದು, ಈ ಬಿಕ್ಕಟ್ಟನ್ನು ಭಾರತ ಯಶಸ್ವಿಯಾಗಿ ಎದುರಿಸುತ್ತಿದೆ ಎಂದು ಪ್ರಧಾನಿ ಹೇಳಿದರು. ಸಂಘರ್ಷದ ಕುರಿತು ಭಾರತದ ನಿಲುವು ಮತ್ತು ಜಾಗತಿಕ ಶಾಂತಿಯ ಕುರಿತ ದೇಶದ ಬದ್ಧತೆ ಬಗ್ಗೆಯೂ ಜಗತ್ತಿಗೆ ತಿಳಿಸಿದರು.
ಸಂಸತ್ ನಲ್ಲಿ ಪ್ರಧಾನಿ ಪಶ್ಚಿಮ ಏಷ್ಯಾ ಯುದ್ಧ ಹಾಗೂ ತೈಲ ಬಿಕ್ಕಟ್ಟಿನ ಕುರಿತು ಮಾತನಾಡುತ್ತಾ ಹಾರ್ಮುಜ್ ಜಲಸಂದಿ ಬಂದ್ ಆಗಿರುವುದರಿಂದ ತೈಲ ಮತ್ತು ಅನಿಲ ಪೂರೈಕೆಯನ್ನು ಸಾಧ್ಯವಿರುವೆಡೆಯೆಲ್ಲಾ ಪಡೆಯಲಾಗುತ್ತಿದೆ ಎಂದು ಹೇಳಿದ್ದಾರೆ.
ಭಾರತಕ್ಕೆ ಬೇಕಾದ ತೈಲ ಮತ್ತು ಅನಿಲ ಪೂರೈಕೆಯ ಮೂಲವೂ ಇಲ್ಲಿದೆ ಎಂದು ನರೇಂದ್ರ ಮೋದಿ ತಿಳಿಸಿದ್ದಾರೆ. ಭಾರತಕ್ಕೆ ಬೇಕಾದ ಶೇ. 60 ರಷ್ಟು LPG ಹಾರ್ಮುಜ್ ಜಲಸಂಧಿ ಮೂಲಕ ಬರುತ್ತದೆ. ದೇಶದಲ್ಲೇ LPG ಉತ್ಪಾದನೆ ಹೆಚ್ಚಿಸಲು ಸರ್ಕಾರ ಕ್ರಮ ತೆಗೆದುಕೊಳ್ಳುತ್ತಿದೆ ಎಂದಿದ್ದಾರೆ.
‘ಹಾರ್ಮುಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರ ಕಷ್ಟವಾಗಿದೆ. ಕಚ್ಛಾ ತೈಲ ಮತ್ತು ರಸಗೊಬ್ಬರ ಪೂರೈಕೆ ಮೇಲೆ ಪರಿಣಾಮ ಬಿದ್ದಿದೆ. ಸರ್ಕಾರವು ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದು, ಹೆಚ್ಚಿನ ವ್ಯತ್ಯಯ ಆಗದಂತೆ ಎಚ್ಚರ ವಹಿಸುತ್ತಿದೆ. ಜನರು ಅನುಭವಿಸುತ್ತಿರುವ ಕಷ್ಟವನ್ನು ಕಡಿಮೆ ಮಾಡುವುದು ಸರ್ಕಾರದ ಆದ್ಯತೆಯಾಗಿದೆ’ ಎಂದು ಮೋದಿ ವಿವರಿಸಿದ್ದಾರೆ.
ಈ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸಲು ಪ್ರಧಾನಿ ಸಚಿವರು ಹಾಗೂ ಕಾರ್ಯದರ್ಶಿಗಳ ಒಂದು ತಂಡವನ್ನು ರಚಿಸಲು ನಿರ್ದೇಶನ ನೀಡಿದ್ದಾರೆ. LPG ಲಭ್ಯತೆ ಹೆಚ್ಚಿಸಲು ವಿವಿಧ ಮಾರ್ಗೋಪಾಯಗಳನ್ನು ಹುಡುಕಲಾಗುತ್ತಿದೆ ಎಂದಿದ್ದಾರೆ.
