ಎಂ.ಎಸ್. ಧೋನಿ IPL ನಿವೃತ್ತಿ ಕುರಿತಂತೆ ಆಗಾಗ ಊಹಾಪೋಹಗಳು ಹರಿದಾಡುತ್ತಿರುತ್ತವೆ. ಪ್ರತಿ ವರ್ಷ IPL ಪ್ರಾರಂಭವಾಗುತ್ತಿದ್ದಂತೆ ಧೋನಿ ಆಡುವುದು ಇದೇ ಕೊನೆ ಎನ್ನುವ ಮಾತುಗಳು ಕೇಳಿ ಬರುತ್ತಲೇ ಇರುತ್ತೆ. 2026ರ ಐಪಿಎಲ್ ಆವೃತ್ತಿ ಅವರ ಕೊನೆಯ ಸೀಸನ್ ಆಗುವ ಸಾಧ್ಯತೆ ಇದೆ ಎನ್ನುವ ಮಾತು ದಟ್ಟವಾಗಿ ಕೇಳಿಬರುತ್ತಿದೆ. ಆದರೆ ಈ ನಡುವೆ ಧೋನಿ 60 ವರ್ಷ ಆಡುವ ಬಗ್ಗೆ ಸುದ್ದಿ ವೈರಲ್ ಆಗಿದೆ. 60 ವರ್ಷದ ವರೆಗೂ ಐಪಿಎಲ್ ಆಡಲು ಪ್ರಯತ್ನಿಸುತ್ತೇನೆ ಎಂದು ಧೋನಿ ಹೇಳಿರುವ ಮಾತು ಈಗ ಅವರ ಅಭಿಮಾನಿಗಳಲ್ಲಿ ಸಂತಸ ಮನೆ ಮಾಡಿದೆ.
ಐದು ಬಾರಿ IPL ಚಾಂಪಿಯನ್ ಆಗಿರುವ ಚನ್ನೈ ಸೂಪರ್ ಕಿಂಗ್ಸ್ ತಂಡ ಭಾನುವಾರ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ “ರೋರ್ 26′ ಹೆಸರಿನಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು. ಇದರಲ್ಲಿ ಹಾಲಿ ಆಟಗಾರರೊಂದಿಗೆ CSK ತಂಡದ ಮಾಜಿ ಆಟಗಾರರೂ ಭಾಗವಹಿಸಿದ್ದರು. ಈ ವೇಳೆ ನಟ ಶಿವಕಾರ್ತಿಕೇಯನ್ ವಿಶೇಷ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಧೋನಿ ಬಳಿ ಮಾತನಾಡಿದ ನಟ ಇನ್ನೂ ಹಲವು ವರ್ಷಗಳ ಕಾಲ ಆಡಬೇಕು, 60 ವರ್ಷದ ತನಕ ಆಡಿದರೆ ಖುಷಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಧೋನಿ ಸ್ವಲ್ಪ ಕಷ್ಟವಾಗುತ್ತೆ ಎಂದರು. ಸಾಧ್ಯವಿದೆ ನಿಮ್ಮ ಬಳಿ ಎಂದಿದ್ದಕ್ಕೆ ‘ನಾನು ಫಿಟ್ ಇದ್ದರೆ ಖಂಡಿತವಾಗಿಯೂ ಆಡಲು ಪ್ರತ್ನಿಸುತ್ತೇನೆ’ ಎಂದು ಮುಗುಳ್ನಕ್ಕರು. ಧೋನಿ ಅವರ ಈ ಮಾತು ಅಭಿಮಾನಿಗಳ ಖುಷಿಗೆ ಕಾರಣವಾಗಿದೆ.
ಈ ಕಾರ್ಯಕ್ರಮದಲ್ಲಿ CSK ತಂಡದ ಮಾಜಿ ಆಟಗಾರರಾದ ಮ್ಯಾಥ್ಯೂ ಹೇಡನ್, ಮೈಕೆಲ್ ಹಸ್ಸೆ, ಡ್ವೇನ್ ಬ್ರಾವೊ, ಮುತ್ತಯ್ಯ ಮುರಳೀಧರನ್, ಹರ್ಭಜನ್ ಸಿಂಗ್, ಮುರಳಿ ವಿಜಯ್, ಸುರೇಶ್ ರೈನಾ, ಪಾರ್ಥಿವ್ ಪಟೇಲ್ ಮತ್ತು ಎಸ್. ಬದರೀನಾಥ್ ಹಳದಿ ಜೆರ್ಸಿಯಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ಜೊತೆಗೆ ಹಾಲಿ ಆಟಗಾರರೊಂದಿಗೆ ಆಡಿ ಸಂಭ್ರಮಿಸಿದರು.
CSK ತಂಡ ಮಾರ್ಚ್ 30ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ಆಡುವ ಮೂಲಕ ಐಪಿಎಲ್ 19ನೇ ಆವೃತ್ತಿ ಪ್ರಾರಂಭಿಸಲಿದೆ.
