ಮಂತ್ರಾಲಯದ ಬಳಿ ಭೀಕರ ರಸ್ತೆ ಅಪಘಾತ: ರಾಯರ ದರ್ಶನಕ್ಕೆ ಹೊರಟಿದ್ದ 8 ಮಂದಿ ದುರ್ಮರಣ

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಮಂತ್ರಾಲಯ ತಾಲೂಕಿನ ಕಲ್ಲುದೇವಕುಂಟ ಗ್ರಾಮದ ಬಳಿ ಗುರುವಾರ ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕರ್ನಾಟಕದ 8 ಮಂದಿ ಸಾವನ್ನಪ್ಪಿದ್ದಾರೆ. ಚಿಕ್ಕಮಗಳೂರು ಮೂಲದ 8 ಮಂದಿ ರಾಯರ ದರ್ಶನಕೆಂದು ಬೊಲೆರೊ ವಾಹನದಲ್ಲಿ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಮಂತ್ರಾಲಯ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೃತಪಟ್ಟವರನ್ನು ಚಿಕ್ಕಮಗಳೂರು ಮೂಲದ ಕುಮಾರ್(50), ದೀಪಿಕಾ, ವೀಣಾ(42), ಸುನೀಲ್ (40), ಪುಟ್ಟಮ್ಮ(55), ಲೋಲಾಕ್ಷಿ, ಯಶೋಧಾ(60) ಹಾಗೂ ಬಾಲಕಿ ಬೆಳ್ಳಿ(5) ಎಂದು ಗುರುತಿಸಲಾಗಿದೆ. ಸದ್ಯ ಘಟನೆ ಸಂಬಂಧ ಟ್ಯಾಂಕರ್ ಚಾಲಕನನ್ನು ಮಂತ್ರಾಲಯ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಿಂದ ಒಟ್ಟು 21 ಮಂದಿ ಭಕ್ತರು ಬೊಲೆರೊ ವಾಹನದಲ್ಲಿ ಮಂತ್ರಾಲಯಕ್ಕೆ ಪ್ರಯಾಣಿಸುತ್ತಿದ್ದರು. ಈ ವೇಳೆ ಕಲ್ಲುದೇವಕುಂಟ ಬಳಿ ಎದುರುಗಡೆಯಿಂದ ಬಂದ ಸಿಮೆಂಟ್ ಮತ್ತು ಜಲ್ಲಿಕಲ್ಲು ತುಂಬಿದ್ದ ಟ್ಯಾಂಕರ್, ಬೊಲೆರೊ ವಾಹನಕ್ಕೆ ಜೋರಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಆರು ಮಂದಿ ಭಕ್ತರು ಸ್ಥಳದಲ್ಲೇ ಮೃತಪಟ್ಟರೆ, ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇನ್ನ 13 ಮಂದಿಯನ್ನು ತಕ್ಷಣವೇ ಎಮಿಗನೂರು ಮತ್ತು ಕರ್ನೂಲ್ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯಿಂದಾಗಿ ಮಂತ್ರಾಲಯಕ್ಕೆ ಹೋಗುವ ಮಾರ್ಗದಲ್ಲಿ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Leave a Reply

Your email address will not be published. Required fields are marked *