2025ರ ಸಾಲಿನ ತೆಲಂಗಾಣದ ಗದ್ದರ್ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಪ್ರಶಸ್ತಿ ಪಡೆದು ಭಾವುಕರಾಗಿದ್ದಾರೆ. ಮಾರ್ಚ್ 19ರಂದು ಹೈದರಾಬಾದ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಶ್ಮಿಕಾ ʻದಿ ಗರ್ಲ್‌ಫ್ರೆಂಡ್ʼ ಸಿನಿಮಾದ ನಟನೆಗಾಗಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದರು. ನಟನೆಗಾಗಿ ರಶ್ಮಿಕಾ ಪಡೆದ ಮೊದಲ ರಾಜ್ಯ ಪ್ರಶಸ್ತಿ ಇದಾಗಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಮತ್ತು ನಟ ರಾಮ್ ಚರಣ್ ಅವರಿಂದ ರಶ್ಮಿಕಾ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ರಶ್ಮಿಕಾ, ‘ಮೊದಲು ನನ್ನ ನಟನೆಗೆ ಟ್ರೋಲ್ ಮಾಡುತ್ತಿದ್ದರು. ಆದರೀಗ ರಾಜ್ಯ ನನಗೆ ಈ ಪ್ರಶಸ್ತಿಯನ್ನು ನೀಡಿದೆ. ನಾನು ಬಹಳ ದೂರ ಬಂದಿದ್ದೇನೆ’ ಎಂದಿದ್ದಾರೆ, ಬಳಿಕ ‘ನಾನು ನಿಮ್ಮ ಮುಂದೆ ಮಗಳಾಗಿ ಬಂದಿದ್ದೆ,ಆದರೀಗ ನಾನು ಸೊಸೆಯಾಗಿ ನಿಮ್ಮ ಮಂದೆ ನಿಂತಿದ್ದೇನೆ. ಇದು ನನಗೆ ತುಂಬಾ ಹೆಮ್ಮೆ ನೀಡಿದೆ’ ಎಂದು ಹೇಳಿದರು.
ರಶ್ಮಿಕಾ ಜೊತೆ ಪ್ರಶಸ್ತಿ ಸಮಾರಂಭಕ್ಕೆ ಅವರ ಅತ್ತೆ ವಿಜಯ್ ದೇವರಕೊಂಡ ಅವರ ತಾಯಿ ಮಾಧವಿ ದೇವರಕೊಂಡ ಬಂದಿದ್ದರು. ರಶ್ಮಿಕಾ ಅವರ ಭಾವುಕ ಮಾತುಗಳನ್ನು ಕೇಳಿ ಕಣ್ಣೀರಾದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.. ಅಮ್ಮನ ಜೊತೆ ಕಾಣಿಸಿಕೊಳ್ಳುತ್ತಿದ್ದ ರಶ್ಮಿಕಾ ಇದೀಗ ಮದುವೆ ಬಳಿಕ ಅತ್ತೆಯ ಜೊತೆ ಕಾರ್ಯಕ್ರಮಗಳಿಗೆ ಹಾಜರಾಗುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಫೆಬ್ರವರಿ 26ರಂದು ಅದ್ದೂರಿಯಾಗಿ ವಿವಾಹವಾದರು. ಸದ್ಯ ಇಬ್ಬರೂ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೂ ಅನೇಕ ವರ್ಷಗಳ ಬಳಿಕ ಹಾಗೂ ಮದುವೆ ನಂತರ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ʻರಣಬಾಲಿʼ ಎನ್ನುವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಸಜ್ಜಾಗಿದ್ದಾರೆ.
