ಸ್ಯಾಂಡಲ್ವುಡ್ ನಿರ್ದೇಶಕ ಪ್ರೇಮ್ ನಿರ್ದೇಶನದ ‘ಕೆಡಿ’ ಸಿನಿಮಾ ಈಗ ಹಾಡಿನ ವಿಚಾರಕ್ಕೆ ದೇಶದಾದ್ಯಂತ ಸದ್ದು ಮಾಡುತ್ತಿದೆ. ಅಶ್ಲೀಲ ಸಾಹಿತ್ಯವಿದೆ ಎನ್ನುವ ವಿಚಾರಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇತ್ತೀಚಿಗಷ್ಟೆ ರಿಲೀಸ್ ಆಗಿರುವ ‘ಸರ್ಸೆ ಸೆರಗು’ ಹಾಡು ಭಾರಿ ವಿವಾದ ಹುಟ್ಟುಹಾಕಿದೆ. ಈ ಹಾಡಿನ ಹಿಂದಿ ಆವೃತ್ತಿ ‘ಸರ್ಕೆ ಚುನರಿ’ ಹಾಡಿನ ವಿರುದ್ಧ ಕೂಡ ತೀವ್ರ ಟೀಕೆ ಮತ್ತು ವಿರೋಧ ವ್ಯಕ್ತವಾಗಿದ್ದು, ಈಗಾಗಲೇ ಸಿಬಿಎಫ್ಸಿ, ಸೈಬರ್ ಪೊಲೀಸರಿಗೆ ದೂರು ದಾಖಲಾಗಿದೆ.
ರಾಷ್ಟ್ರೀಯ ಮಹಿಳಾ ಆಯೋಗ ಸಹ ಹಾಡಿನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದು, ನಿರ್ದೇಶಕ ಮತ್ತು ಗೀತರಚನೆಕಾರ ಪ್ರೇಮ್ ಸೇರಿದಂತೆ ನೋರಾ ಫತೇಹಿ, ಸಂಜಯ್ ದತ್ ಇನ್ನೂ ಹಲವರಿಗೆ ನೊಡೀಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಇದೀಗ ನಟಿ ನೋರಾಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಲೋಕಸಭೆ ಅಧಿವೇಶನದಲ್ಲಿಯೂ ಸಹ ಹಾಡಿನ ಕುರಿತು ಚರ್ಚೆ ಆಗಿದೆ. ಇದೀಗ ಉತ್ತರ ಪ್ರದೇಶದ ಮುಸ್ಲಿಂ ಧಾರ್ಮಿಕ ಸಂಸ್ಥೆಯ ಮೌಲ್ವಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಉತ್ತರ ಪ್ರದೇಶದ ಅಲಿಗಢದಲ್ಲಿರುವ ಮುಸ್ಲಿಂ ಪರ್ಸನಲ್ ದಾರುಲ್ ಇಫ್ತಾ ಎಂಬ ಧಾರ್ಮಿಕ ಸಂಸ್ಥೆಯು ಬಾಲಿವುಡ್ ನಟಿ ನೋರಾ ಫತೇಹಿ ವಿರುದ್ಧ ಫತ್ವಾ ಹೊರಡಿಸಿದೆ. ಕನ್ನಡ ಚಿತ್ರ ‘ಕೆಡಿ: ದಿ ಡೆವಿಲ್’ ಚಿತ್ರದ ‘ಸರ್ಕೆ ಚುನರ್ ತೇರಿ’ ಹಾಡಿನಲ್ಲಿನ ಅವರ ಅಶ್ಲೀಲ ನೃತ್ಯ ಪ್ರದರ್ಶನಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆಯಂತೆ. ಹಾಡಿನಲ್ಲಿರುವ ನೃತ್ಯದ ಭಂಗಿಗಳು ಮತ್ತು ಸಾಹಿತ್ಯವು ‘ಅಶ್ಲೀಲ’ವಾಗಿದ್ದು, ಇಸ್ಲಾಮಿಕ್ ಬೋಧನೆಗಳು ಮತ್ತು ನೈತಿಕ ಮೌಲ್ಯಗಳಿಗೆ ವಿರುದ್ಧವಾಗಿದೆ ಎಂದು ಧಾರ್ಮಿಕ ಸಂಸ್ಥೆ ಹೇಳಿದೆ. ಇದು ಸಮಾಜದ ಮೇಲೆ ಕೆಟ್ಟ ಪ್ರಭಾವ ಬೀರುತ್ತದೆ ಎಂದು ಮೌಲಾನಾ ಚೌಧರಿ ಇಫ್ರಾಹೀಮ್ ಹುಸೇನ್ ತಿಳಿಸಿದ್ದಾರೆ.
ಫತ್ವಾ ಎನ್ನುವುದು ಇಸ್ಲಾಂನಲ್ಲಿ ಮುಫ್ತಿ ಎಂದು ಕರೆಯಲ್ಪಡುವ ಧಾರ್ಮಿಕ ಕಾನೂನು ತಜ್ಞರು ನಿರ್ದಿಷ್ಟ ವಿಷಯದ ಕುರಿತು ನೀಡುವ ಅಭಿಪ್ರಾಯವಾಗಿದೆ. ಇದಕ್ಕೆ ಕಾನೂನಿನ ಮಾನ್ಯತೆ ಇರುವುದಿಲ್ಲ.
ಈ ವಿವಾದದ ಕುರಿತು ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಹಂಚಿಕೊಂಡಿರುವ ನೋರಾ ಫತೇಹಿ, ‘ನಾನು ಈ ಹಾಡನ್ನು ಮೂರು ವರ್ಷಗಳ ಹಿಂದೆ ಕನ್ನಡದಲ್ಲಿ ಚಿತ್ರೀಕರಿಸಿದ್ದೆ. ಆ ಸಮಯದಲ್ಲಿ ಚಿತ್ರತಂಡ ನೀಡಿದ ವಿವರಣೆಯನ್ನು ನಂಬಿದ್ದೆ. ನನಗೆ ಕನ್ನಡ ಭಾಷೆ ತಿಳಿಯದ ಕಾರಣ ಅದರ ಅರ್ಥ ಗೊತ್ತಿರಲಿಲ್ಲ. ಹಿಂದಿ ಆವೃತ್ತಿಯ ಸಾಹಿತ್ಯ ಮತ್ತು ಡಬ್ಬಿಂಗ್ ನನ್ನ ಗಮನಕ್ಕೆ ಬಾರದೆ ನಡೆದಿದೆ’ ಎಂದು ಹೇಳಿದ್ದಾರೆ.
