ವರನಟ ಡಾ. ರಾಜ್‌ಕುಮಾರ್ ಅಂದರೆ ಯಾರಿಗೆ ತಾನೆ ಪ್ರೀತಿ ಇಲ್ಲ. ಕನ್ನಡದವರು ಮಾತ್ರವಲ್ಲ ಪರಭಾಷಾ ಕಲಾವಿದರು, ಬೇರೆ ಬೇರೆ ಕ್ಷೇತ್ರದ ಅನೇಕ ಗಣ್ಯರು ಸಹ ಅಣ್ಣಾವ್ರನ್ನ ಪ್ರೀತಿಯಿಂದ ಗೌರವಿಸುತ್ತಾರೆ, ಆರಾಧಿಸುತ್ತಾರೆ. ಅನೇಕ ಸೂಪರ್ ಹಿಟ್‌ಗಳ ಸರದಾರ ಅಣ್ಣಾವ್ರ ಸಿನಿಮಾಗಳು ಅಂದರೆ ಈಗಲೂ ಅನೇಕರಿಗೆ ಮಾದರಿ. ಅವರ ಖ್ಯಾತಿ ವಿಶ್ವಾದ್ಯಂತ ಹಬ್ಬಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ರಾಜ್‌ಕುಮಾರ್ ಅವರ ಹಾಡನ್ನು ಹಂಚಿಕೊಂಡಿದ್ದಾರೆ. ಇದು ಅಣ್ಣಾವ್ರ ಅಭಿಮಾನಿಗಳು ಹಾಗೂ ಕನ್ನಡಿಗರಿಗೆ ಖುಷಿ ಕೊಟ್ಟಿದೆ.
ರಾಜ್‌ಕುಮಾರ್ ಎಲ್ಲಾ ರೀತಿಯ ಪಾತ್ರಗಳಲ್ಲಿ ಮಿಂಚಿದ್ದಾರೆ. ಅದರಲ್ಲೂ ಪೌರಾಣಿಕ, ಭಕ್ತಿ ಪ್ರಧಾನ ಸಿನಿಮಾಗಳಂತು ರಾಜ್ ಕುಮಾರ್ ಅವರನ್ನು ನಿಜಕ್ಕೂ ದೇವರನ್ನಾಗಿವೆ ಎಂದರು ತಪ್ಪಾಗಲ್ಲ. ಅದರಲ್ಲಿ ‘ಶ್ರೀ ಕೃಷ್ಣದೇವರಾಯ’ ಸಿನಿಮಾ ಕೂಡ ಈ ಚಿತ್ರದಲ್ಲಿ ರಾಜ್‌ಕುಮಾರ್ ಅವರು ಕೃಷ್ಣದೇವರಾಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ 1970ರಲ್ಲಿ ಬಿಡುಗಡೆಯಾಗಿದ್ದು, ಈ ಚಿತ್ರದ ‘ಶ್ರೀ ಚಾಂಮುಂಡೇಶ್ವರಿ..’ ಹಾಡು ಇಂದಿಗೂ ಅಷ್ಟೆ ಪ್ರಸಿದ್ಧಿ. ಈ ಹಾಡನ್ನು ಈಗ ಮೋದಿ ಶೇರ್ ಮಾಡಿಕೊಂಡು ಅಚ್ಚರಿ ಮೂಡಿಸಿದ್ದಾರೆ.
‘ಶ್ರೀ ಚಾಂಮುಂಡೇಶ್ವರಿ..’ ಹಾಡಿನ ಯೂಟ್ಯೂಬ್ ಲಿಂಕ್ ಶೇರ್ ಮಾಡಿ, ‘ಜಗತ್ಜನನಿ ಮಾತೆಯ ಮೇಲಿನ ಅಚಲ ನಂಬಿಕೆಯು ಆಕೆಯ ಭಕ್ತರಲ್ಲಿ ಹೊಸ ಪ್ರಜ್ಞೆ ಮತ್ತು ಶಕ್ತಿಯನ್ನು ತುಂಬಲಿದೆ’ ಎಂದು ಹೇಳಿದ್ದಾರೆ. ಈ ಸಾಲುಗಳನ್ನು ಉಲ್ಲೇಖ ಮಾಡಲು ಪ್ರಧಾನಿ ಮೋದಿ ಕನ್ನಡದ ಹಾಡನ್ನು ಆದರಲ್ಲೂ ಅಣ್ಣಾವ್ರ ಹಾಡವನ್ನು ಹಂಚಿಕೊಂಡಿರುವುದು ನಿಜಕ್ಕೂ ಕನ್ನಡಿಗರಿಗೆ ಖುಷಿಯ ವಿಚಾರವಾಗಿದೆ.
